ನಾಟ್ಸಿ
1933ರಿಂದ 1945ರ ವರೆಗೆ ಜರ್ಮನಿಯಲ್ಲಿ ಪ್ರಬಲವಾಗಿದ್ದ ರಾಷ್ಟ್ರೀಯ ಸಮಾಜವಾದಿ ಜರ್ಮನ್ ಕಾರ್ಮಿಕರ ಪಕ್ಷದ ಜರ್ಮನ್ ಹೆಸರಾದ ನಾಟ್ಸಿಯೊನಾಲ್ ಸೋಷಿಯಾಲಿಸ್ಟಿಷೆ ಡಾಯಿಟ್ಷೆ ಆರ್‍ಬೈಟರ್ ಪಾರ್ಟೈ ಎಂಬುದರ (ಎನ್‍ಎಸ್‍ಡಿಎಪಿ) ಸಂಕ್ಷಿಪ್ತನಾಮ. ಈ ಪಕ್ಷದ ಸದಸ್ಯರನ್ನು ನಾಟ್ಸಿಗಳೆಂದು ಕರೆಯುವುದೇ ವಾಡಿಕೆಯಾಗಿದೆ. 1919ರಲ್ಲಿ ಜರ್ಮನ್ ಕಾರ್ಮಿಕರ ಪಕ್ಷ ಎಂಬ ಹೆಸರಿನಿಂದ ಆರಂಭವಾದ ಈ ಪಕ್ಷದ ಹೆಸರನ್ನು ರಾಷ್ಟ್ರೀಯ ಸಮಾಜವಾದಿ ಜರ್ಮನ್ ಕಾರ್ಮಿಕರ ಪಕ್ಷವೆಂದು ಬದಲಾಯಿಸಲಾದ್ದು 1920ರಲ್ಲಿ. ಮರುವರ್ಷದ ಆದಿಯಲ್ಲಿ ಅಡಾಲ್ಫ್ ಹಿಟ್ಲರ್ ಇದರ ನಾಯಕನಾದ. 1933ರಲ್ಲಿ ಈ ಪಕ್ಷ ದೇಶದ ಅಧಿಕಾರವನ್ನು ಪಡೆದುಕೊಂಡಿತು. ಹಿಟ್ಲರ್ ಸಮಗ್ರವಾದಿ ಸರ್ವಾಧಿಕಾರವನ್ನು ಸ್ಥಾಪಿಸಿ 1945ರ ವರೆಗೂ ಆಳಿದ.	
 (ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ